ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದಲ್ಲಿ (Green Line) ಸಂಚರಿಸಿದ ರೀ ರೈಲ್ ವಾಹನ ಆಯತಪ್ಪಿದ ಹಿನ್ನಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಹಳಿ ತಪ್ಪಿದ ಪರಿಣಾಮ ಈ ಸಮಸ್ಯೆ ಎದುರಾಗಿದೆ.
ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಹಳಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿದ್ದು, ಯಶವಂತಪುರದಿಂದ ಮಂತ್ರಿ ಸ್ಕ್ವೇರ್ವರೆಗೆ ರೈಲುಗಳು ಏಕಮುಖವಾಗಿ ಮಾತ್ರ ಸಂಚರಿಸುತ್ತಿವೆ. ಸದ್ಯ ಈಗ ಹಸಿರು ಮಾರ್ಗದಲ್ಲಿ ಅರ್ಧಗಂಟೆಗೊಂದು ರೈಲು ಸಂಚರಿಸುತ್ತಿದೆ. ರೀ ರೈಲ್ ವಾಹನವನ್ನು ಹಳಿಗೆ ತರಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇಂದು ಮಧ್ಯಾಹ್ನದವರೆಗೂ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ರೀ ರೈಲ್ ತೆರವು ಆಗುವವರೆಗೆ ಏಕಮುಖ ಸಂಚಾರ ಇರಲಿದೆ ಎಂದು ಬಿಎಂಆರ್ಸಿಎಲ್ (BMRCL) ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.