ಬೆಂಗಳೂರು: ಶಿವಮೊಗ್ಗ ಕೋಮುಗಲಭೆ ಪ್ರಕರಣದಲ್ಲಿ 43ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಲಾಗಿದ್ದು, ಸದ್ಯ ಶಿವಮೊಗ್ಗ ಶಾಂತಿಯುತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ರಾಗಿಗುಡ್ಡದಲ್ಲಿ ಈ ಘಟನೆ ನಡೆದಿದ್ದು,
ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಕಲ್ಲು ತೂರಾಟ ಮಾಡಿದವರು, ಗಲಾಟೆ ಮಾಡಿದ 43ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಲಾಗಿದೆ. ಅವರ ಮೇಲೆ ಮೊಕದ್ದಮೆ ಹಾಕಲಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಕಲ್ಲು ಎಸೆಯೋದು ಕಾನೂನು ಬಾಹಿರ ಚಟುವಟಿಕೆ. ಇಂತಹ ಘಟನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇಂತಹ ಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತೇನೆ ಎಂದರು.