ಬೆಂಗಳೂರು ;- ಶ್ರೀಲಂಕಾದ ಸೀರಿಯಲ್ ಕಿಲ್ಲರ್ಸ್ ಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ನಡೆಯಬಹುದಾಗಿದ್ದ ದೊಡ್ದದೊಂದು ಅನಾಹುತ ತಪ್ಪಿದಂತಾಗಿದೆ ಎನ್ನಬಹುದು. ಇನ್ನು ಶ್ರೀಲಂಕಾದ ಮೂವರು ಸುಪಾರಿ ಕಿಲ್ಲರ್ಸ್ ಬೆಂಗಳೂರಿಗೆ ಬಂದಿದ್ಯಾಕೆ? ಇವರನ್ನ ಇಲ್ಲಿಗೆ ಕರೆಸೋ ಉದ್ದೇಶ ಏನಾಗಿತ್ತು? ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದ್ರೆ ಸಿಟಿಯಲ್ಲಿ ಈ ಕಿಲ್ಲರ್ಸ್ ಗೆ ರೌಡಿ ಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ.
ವೀಸಾ ಪಾಸ್‌ಪೋರ್ಟ್ ಇಲ್ಲದೆ ಬೋಟ್ ಮೂಲಕ ಭಾರತದ ಗಡಿ ಪ್ರವೇಶಿಸಿರೋ ಶ್ರೀಲಂಕಾ ಆರೋಪಿಗಳು ಸೇಲಂನಿಂದ ಬೆಂಗಳೂರು ತಲುಪಿದ್ದಾರೆ. ರೌಡಿಶೀಟರ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳಿ ದಾಳಿ ನಡೆಸಿ ಸದ್ಯ ನಾಲ್ವರನ್ನ ಬಂಧಿಸಿದ್ದಾರೆ. ರೌಡಿಶೀಟರ್ ಜೈ ಪರಮೇಶ್ ಹಾಗೂ ಶ್ರೀಲಂಕಾ ಪ್ರಜೆಗಳಾದ ಕಸನ್ ಕುಮಾರ ಸನಕ, ಅಮಿಲಾ ನೂವಾನ್ ಮತ್ತು ರಂಗಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ 20 ದಿನಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಪ್ರಜೆಗಳು ಯಲಹಂಕ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ಪಡೆದಿದ್ದರು.
ಶ್ರೀಲಂಕಾದಲ್ಲಿ ಮೂವರ ಮೇಲೆ ಸರಣಿ ಕೊಲೆ ಪ್ರಕರಣ ಇದ್ದು, ಸಿಸಿಬಿಯ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಅಪರಾಧ ಹಿನ್ನಲೆಯನ್ನ ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಕಸನ್ ಕುಮಾರ ಸನಕ ಮೇಲೆ ನಾಲ್ಕು ಕೊಲೆ ಕೇಸ್, ಅಮಿಲಾ ನೂವಾನ್ ಮೇಲೆ ಐದು ಕೊಲೆ ಕೇಸ್ ಹಾಗೂ ರಂಗಪ್ರಸಾದ್ ಮೇಲೆ ಎರಡು ಕೊಲೆ ಮತ್ತೆ ಎರಡು ಹಲ್ಲೆ ಪ್ರಕರಣ ದಾಖಲಾಗಿವೆ. ಸಿಸಿಬಿ ದಾಳಿ ವೇಳೆ 13 ಮೊಬೈಲ್ ಫೋನ್, ಶ್ರೀಲಂಕಾ ವಿಳಾಸದ ವೀಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ಹಲವು ಮಂದಿಯ ಆಧಾರ್ ವೋಟರ್ ಐಡಿಯ ಜೆರಾಕ್ಸ್ ಪ್ರತಿಗಳು ಪತ್ತೆಯಾಗಿದ್ದು, ಆರೋಪಿಗಳು ನಗರದಲ್ಲಿ ಕಾನೂನು ಬಾಹಿರ ಕೃತ್ಯ ಎಸಗಲು ಸಂಚು ರೂಪಿಸಿದ್ರಾ? ಅನ್ನೋ ಆತಂಕ ಮೂಡಿದೆ.