ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪಕ್ಷ ಚುನಾವಣೆಗೂ ಮೊದಲು ನೀಡಿದ್ದಂತ ಐದು ಗ್ಯಾರಂಟಿಗಳನ್ನು ತಾತ್ವಿಕವಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಮೂರು ದಿನಗಳ ವಿಶೇಷ ಅಧಿವೇಷನವನ್ನು ಇಂದಿನಿಂದ ಆರಂಭಿಸಲಾಗುತ್ತಿದೆ.
ಮೇ.22ರಿಂದ 24ರವರೆಗೆ 16ನೇ ವಿಧಾನಸಭೆಯ ಮೊದಲ ವಿಶೇಷ ಅಧಿವೇಶನ ನಡೆಯಲಿದೆ.
ಮೊದಲು ಎರಡು ದಿನ 224 ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಂಗಾಮಿ ಸ್ವೀಕರ್ ಆರ್ ವಿ ದೇಶಪಾಂಡೆ ಪ್ರತಿಜ್ಞಾವಿಧಿಯನ್ನು ನೂತನ ಶಾಸಕರಿಗೆ ಬೋಧಿಸಲಿದ್ದಾರೆ. ಸಭಾಧ್ಯಕ್ಷರು ಆಯ್ಕೆಯಾಗುವವರೆಗೂ ಹಂಗಾಮಿ ಸ್ಪೀಕರ್ ಆಗಿ ಆರ್ ವಿ ದೇಶಪಾಂಡೆ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.
ಮೇ.24ರಂದು ವಿಧಾನಸಭೆಯ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದಕ್ಕಾಗಿ ವಿಧಾನಸಭೆ ಬುಲೆಟಿನ್ ಹೊರಡಿಸಿದ್ದು, ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್ ಆಯ್ಕೆಯಾಗಿರುವ ಸಂಪ್ರದಾಯವಿದ್ದು, ಈ ಬಾರಿಯೂ ಹಿರಿಯ ಶಾಸಕರೊಬ್ಬರ ಮನವೊಲಿಸುವ ಕೆಲಸವನ್ನು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ಸ್ಪೀಕರ್ ಆಯ್ಕೆ ಪಟ್ಟಿಯಲ್ಲಿ ಆರ್ ವಿ ದೇಶಪಾಂಡೆ, ಟಿ.ಬಿ ಜಯಚಂದ್ರ, ಹೆಚ್ ಕೆ ಪಾಟೀಲ್ ಹೆಸರಿದ್ದು, ಸ್ಪೀಕರ್ ಆಗಲು ಒಪ್ಪಿಲ್ಲ ಎನ್ನಲಾಗುತ್ತಿದೆ. ಇದು ಕೂಡ ಈಗ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಮೇ.24ರವರೆಗೆ ಕಾದು ನೋಡಬೇಕಿದೆ.