ಮೈಸೂರು: ನಾವೇನು ಹಿಂದೂಗಳಲ್ಲವೇ? ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಮುತ್ತಿನಮುಳುಸೋಗೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಭಾವನೆಗಳಿಗಿಂತ ಜನರಿಗೆ ಬದುಕು ಮುಖ್ಯ. ಕೆಲವೊಬ್ಬರು ಭಾವನೆಯ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ.
ನಾವೇನೂ ಹಿಂದೂಗಳಲ್ಲವೇ, ಆಂಜನೇಯ ನಮ್ಮ ದೇವರಲ್ಲವೇ?, ನಮಗೆಲ್ಲಾ ದೇವರ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವ, ವೆಂಕಟೇಶ್ ಅವರ ಹೆಸರಿನಲ್ಲಿ ವೆಂಕಟೇಶ, ಶಿವನ ಅವತಾರ ಮಹದೇವನ ಹೆಸರಿನ ಎಚ್.ಸಿ. ಮಹದೇವಪ್ಪ ಇಲ್ಲವೇ?, ನಾವೇನೂ ಹಿಂದೂಗಳಲ್ಲವೇ? ನಮ್ಮೆಲ್ಲರ ಬದುಕಿಗೆ ನಮ್ಮದೇ ಆದ ವಿಚಾರ ಇರುತ್ತದೆ ಎಂದರು.