ಮೈಸೂರು: ಸಂಸದ ಪ್ರತಾಪ್ ಸಿಂಹ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ನಡೀತಿರೋ ವಾಗ್ಯುದ್ಧ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಮೇಲೆ FIR ಅದ ತಕ್ಷಣವೇ ಇದೀಗ ಫೇಸ್ ಬುಕ್ ಲೈವ್ ಗೆ ಬಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಫೇಸ್ ಬುಕ್ ಲೈವ್ ಬಂದ ಸಿಂಹ,
ಸೋಮಾರಿ ಸಿದ್ದ ಅಂತ ಪದ ಬಳಸಿದ್ದು ಸಿಎಂ ಸಿದ್ದರಾಮಯ್ಯರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋ ಪದ ಒಂದು ನಾಣ್ನುಡಿ ಅಷ್ಟೇ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.ಕಲ್ಲು ಬಿಸಾಡಿದರೆ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಪ್ರತಾಪ್ ಸಿಂಹ. ನೀವು ಕಲ್ಲು ಬಿಸಾಕಿದರೆ ನಾನು ಕೂಡ ಕಲ್ಲೇ ಬಿಸಾಕುತ್ತೇನೆ ಎಂದು ಸಿಎಂಗೆ ಮತ್ತೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವ್ರೆ, ನೀವು ಮಹಾರಾಜರನ್ನ, ಪ್ರಧಾನಿ ಮೋದಿ, ದೇವೇಗೌಡರು ಮತ್ತು ಯಡಿಯೂರಪ್ಪ ಬಗ್ಗೆ ಏಕವಚನದಲ್ಲೇ ಮಾತುಗಳನ್ನ ಆಡಿದ್ದೀರಿ. ಕಾಂಗ್ರೆಸ್ ಸೇರುವ ಮುನ್ನ ಸೋನಿಯಾ ಗಾಂಧಿಯವರನ್ನು ಏಕವಚನದಲ್ಲಿ ಕರೆದವರು ನೀವು. ನಿಮ್ಮಿಂದ ನನಗೆ ಬಹುವಚನ – ಏಕವಚನದ ಪಾಠ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹುಣಸೂರಲ್ಲಿ ನಾನು ಬಳಸಿದ್ದ ನಾಣ್ನುಡಿಯನ್ನು ನಿಮಗೆ ಬಳಸಿದ್ದು ಅಂತಾ ತಿರುಚುವ ಯತ್ನ ನಡೆದಿದೆ. ಮೈಸೂರಿನಲ್ಲಿನ ನಿಮ್ಮ ಹಿಂಬಾಲಕರಿಗೆ ಎಂಪಿ ಟಿಕೆಟ್, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಗ ಕೊಡಿ. ನಿಮ್ಮನ್ನು ಓಲೈಸಲು ನಿಮ್ಮ ಹಿಂಬಾಲಕರು ನನ್ನ ಮೇಲೆ ವಿನಾಕಾರಣ ಸುಳ್ಳು ಸೃಷ್ಟಿ ಮಾಡುತ್ತಾರೆ, ಅವರಿಗೆ ಬೇಗ ಅಧಿಕಾರ ಕೊಡಿ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.