ಗೋವಾದಲ್ಲಿ ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ: ಬೆಂಗಳೂರಿನಲ್ಲಿ CEO ಆಗಿದ್ದ ಹಂತಕಿ!

ಚಿತ್ರದುರ್ಗ: ಸ್ವಂತ ಮಗುವನ್ನೇ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಶವವಿಟ್ಟುಕೊಂಡು ತೆರಳುತ್ತಿದ್ದ‌ ಮಹಿಳೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣೆ ಪೊಲೀಸರು (Chitradurga Police Station) ಬಂಧಿಸಿರುವ ಘಟನೆ ನಡೆದಿದೆ.

ಗೋವಾದಿಂದ ಬೆಂಗಳೂರಿಗೆ (Goa To Bengaluru) ತೆರಳುತ್ತಿದ್ದ ಸ್ಟಾರ್ಟ್‌ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ (Suchana Seth) ವಿರುದ್ಧ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದರು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದರು. ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನ ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ (Taxi) ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಆಕೆ ಹೋಟೆಲ್‌ನಿಂದ (Hotel) ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಗೋವಾ ಪೊಲೀಸರು ಹೋಟೆಲ್ ಸಿಬ್ಬಂದಿ ಕರೆಸಿದ್ದ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಆಕೆಯೊಂದಿಗೆ ಮಾತನಾಡಲು ಹೇಳಿದ್ದಾರೆ. ಆಕೆಯ ಮಗನ ಬಗ್ಗೆ ಕೇಳಿದಾಗ ಅವನು ಸ್ನೇಹಿತನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಳು. ಆತನ ವಿಳಾಸವನ್ನೂ ನೀಡಿದ್ದಳು. ಪೊಲೀಸರು ಆ ವಿಳಾಸವನ್ನ ಪರಿಶೀಲಿಸಿದಾಗ ನಕಲಿಯಾಗಿತ್ತು. ನಂತರ ಟ್ಯಾಕ್ಸಿ ಡ್ರೈವರ್‌ಗೆ ಹೈವೆಬಳಿ ಪೊಲೀಸರು ಕಂಡಾಕ್ಷಣ ಟ್ಯಾಕ್ಸಿ ನಿಲ್ಲಿಸುವಂತೆ ತಿಳಿಸಿದ್ದಾರೆ.

ನಂತರ ಟ್ಯಾಕ್ಸಿ ಚಾಲಕ ರಾಷ್ಟ್ರೀಯ ಹೆದ್ದಾರಿ-4ರ ಬಳಿಯ ಐಮಂಗಲ ಠಾಣೆ ಪೊಲೀಸರಿಗೆ ಆಕೆಯನ್ನ ಒಪ್ಪಿಸಿದ್ದಾನೆ. ಬಳಿಕ ಟ್ಯಾಕ್ಸಿ ತಪಾಸಣೆ ಮಾಡಿದ ಐಮಂಗಲ ಪೊಲೀಸರಿಗೆ ಟ್ಯಾಕ್ಸಿ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವಪತ್ತೆಯಾಗಿದೆ. ಸದ್ಯ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸುಚನಾಳನ್ನ ಗೋವಾ ಪೊಲೀಸರಿಗೆ ಒಪ್ಪಿಸಿರುವುದಾಗಿ ಐಮಂಗಲ ಪೊಲೀಸರು ತಿಳಿಸಿದ್ದಾರೆ

Loading

Leave a Reply

Your email address will not be published. Required fields are marked *