ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ಯೋಜನೆಗೆ ಜೂನ್ 11ರಂದು ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಹೀಗಾಗಿ ಸಿಎಂ ಭಾನುವಾರ ಬೆಂಗಳೂರಿನ ಮೆಜೆಸ್ಟಿಕ್ನಿಂದ ಹೊರಡುವ ಮಾರ್ಗ ಸಂಖ್ಯೆ 43ರ ಬಿಎಂಟಿಸಿ ಬಸ್ನಲ್ಲಿ ಆ ದಿನ ಪಾರ್ಟ್ಟೈಂ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರ ಬಳಿ ತೆರಳಿ ‘ಟಿಕೆಟ್ ಟಿಕೆಟ್…’ ಎನ್ನುತ್ತಾ ಉಚಿತ ಟಿಕೆಟ್ ವಿತರಿಸಲಿದ್ದಾರೆ. ಇದೇ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್ನಿಂದ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ರೂಟ್ ನಂ.43 ಬಸ್ನಲ್ಲಿ ಕಂಡಕ್ಟರ್ ರೀತಿ ಟಿಕೆಟ್ ವಿತರಿಸುವ ಮೂಲಕ ಈ ಮಹಾತ್ವಾಕಾಂಕ್ಷಿ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಿದ್ದಾರೆ. ಅನಂತರ ವಿಧಾನಸೌಧದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳ ಉದ್ಘಾಟನೆಯೂ ಸಹ ವಿಭಿನ್ನವಾಗಿರಬೇಕು ಎಂಬ ಆಲೋಚನೆಯಲ್ಲಿರುವ ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕ್ ಈ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.