ಕುಷ್ಠಗಿ – ಕೆಎಸ್ ಈಶ್ವರಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ಸಿಗರು ರಾಜ್ಯವನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಆಶ್ವಾಸನೆ ಕೊಡುತ್ತಾ ಅಧಿಕಾರಕ್ಕೆ ಬಂದಿದ್ದಾರೆ. ಅವರನ್ನು ಸಿದ್ದರಾಮಯ್ಯ ಎನ್ನುವ ಬದಲಿಗೆ ಸುಳ್ಳಿನರಾಮಯ್ಯ ಎಂದರೆ ತಪ್ಪಾಗಲಾರದು ಎಂದರು.
ಕಾಂಗ್ರೆಸ್ಸಿಗರು ರಾಜ್ಯವನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲ್ಲ ಎಂದ ತಕ್ಷಣ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಮಂಗನಂತೆ ಗಿಡದಿಂದ ಗಿಡಕ್ಕೆ ಜಿಗಿಯುವ ಕೆಲಸ ಮಾಡುತ್ತಾರೆ. ನಾನು ಅಧಿಕಾರ ಸಿಗದೇ ಇದ್ದರೂ ನಮ್ಮ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದರು.
ಕಾಂಗ್ರೆಸ್ಸಲ್ಲಿ ಕಲಹ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಬಹಳಷ್ಟು ಹುಟ್ಟಿಕೊಂಡಿದ್ದಾರೆ. ಈ ಸರ್ಕಾರ ಬಹಳಷ್ಟು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು. ಪ್ರಿಯಾಂಕ ಖರ್ಗೆ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುತ್ತಿದ್ದಾರೆ. ಅವರು ಇನ್ನೂ ಬಚ್ಚಾ. ಅವರಪ್ಪನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದ ಇವರು, ಈತನಿಗೆ ಹೇಗೆ ಬಿಟ್ಟು ಕೊಡ್ತಾರೆ? ಎಂದು ವ್ಯಂಗ್ಯವಾಡಿದರು.