ಖ್ಯಾತ ನಟ, ಕನ್ನಡದ ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬುನಿಧನರಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸ್ವತಃ ಜನಪ್ರಿಯ ನಟಿ ಖುಷ್ಬು ಸಹ ಶರತ್ ಬಾಬು ನಿಧನದ ಸುದ್ದಿ ಹಂಚಿಕೊಂಡಿದ್ದರು. ಆದರೆ ಅದು ಸುಳ್ಳು ಸುದ್ದಿಯಾಗಿದ್ದು, ಶರತ್ ಬಾಬು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರಿ ತಿಳಿಸಿದ್ದಾರೆ.
ಶರತ್ ಬಾಬು ಅವರನ್ನು ಏಪ್ರಿಲ್ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ತುಸು ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಏಪ್ರಿಲ್ 20 ರ ಸುಮಾರಿಗೆ ಹೈದರಾಬಾದ್ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ ಎನ್ನಲಾಗುತ್ತಿದೆ.
ಶರತ್ ಬಾಬು ನಿಧನರಾಗಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಕೆಲವು ಟಾಲಿವುಡ್, ಕಾಲಿವುಡ್ ಸೆಲೆಬ್ರಿಟಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಶೋಕ ಸಂದೇಶಗಳನ್ನು ಪ್ರಕಟಿಸಿದ್ದರು. ಆದರೆ ಸುದ್ದಿ ಸುಳ್ಳೆಂದು ಖಾತ್ರಿಯಾದ ಬಳಿಕ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ.