ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಆದ್ರೆ ಏಕಕಾಲಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ದಾಂಗುಡಿ ಇಡುತ್ತಿರುವುದರಿಂದ KSRTC ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ (Tourist Place) ತೆರಳುವವರಿಗೆ ಮಾರ್ಗಸೂಚಿ ನಿಗದಿಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಮಹಿಳೆಯರು ಏಕಕಾಲಕ್ಕೆ ಧಾವಿಸುತ್ತಿರುವುದರಿಂದ ಬಸ್ ಕಿಟಕಿ, ಬಾಗಿಲುಗಳು ಮುರಿಯೋದು, ಡ್ರೈವರ್ ಸೀಟಿನಲ್ಲೇ ಹತ್ತೋದು ಕಂಡುಬರುತ್ತಿದೆ. ಆದ್ದರಿಂದ ಮಾರ್ಗಸೂಚಿ ನಿಗದಿ ಮಾಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅಧಿಕಾರಿಗಳೊಂದಿಗೆ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರು ಪ್ರಯಾಣ ಮಾಡಲಿ, ಆದ್ರೆ ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಶಕ್ತಿ ಯೋಜನೆ 5 ವರ್ಷವೂ ಇರುತ್ತೆ, ಅದರಲ್ಲಿ ಯಾರಿಗೂ ಆತಂಕ ಬೇಡ. ಆದ್ರೆ ಎಲ್ಲರೂ ಒಂದೇ ದಿನ ಪ್ರಯಾಣ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹಾಗಾಗಿ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನೆರಡೇ ದಿನದಲ್ಲಿ ಮಾರ್ಗಸೂಚಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಕೆಲ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಹೋಗಿ, ಪ್ರವಾಸಿ ತಾಣಗಳಿಗೆ ಹೋಗಿ ಅಂತಾ ಪ್ರಚೋದನೆ ಕೊಡ್ತಿದ್ದಾರೆ. ಒಮ್ಮೆಲೆ ಎಲ್ಲರೂ ಹೋಗೋದು ಬೇಡ ಅಂತಾ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆಮೇಲೆ 6 ತಿಂಗಳ ನಂತರ ಪ್ರಯಾಣ ಮಾಡ್ತಾರೆ. 15 ದಿನಕ್ಕೆ ಕಾದು ನೋಡಿ ಅಂತಾ ಅಧಿಕಾರಿಗಳು ಹೇಳಿದ್ದಾರೆ.