ಮಂಡ್ಯ :- ಸಾವಿನ ಹೆದ್ದಾರಿ ಎಂದೇ ಪ್ರಖ್ಯಾತಿಗೆ ಹೆಸರುವಾಸಿಯಾಗುತ್ತಿರುವ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸರಣಿ ಅಪಘಾತ ಸಂಭವಿಸಿದೆ.
ಮದ್ದೂರು ಬೈಪಾಸ್ ರಸ್ತೆಯ ಕೆ.ಕೋಡಿಹಳ್ಳಿ ಬಳಿ ಈ ಘಟನೆ ಜರುಗಿದ್ದು, ಸರಣಿ ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಮೂರ್ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜಹಂಸ ಬಸ್ ಮದ್ದೂರಿನ ಬೈಪಾಸ್ ರಸ್ತೆಯ ಕೆ.ಕೋಡಿಹಳ್ಳಿ ಸಮೀಪ ಮುಂದೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಂದೆ ಹೋಗುತ್ತಿದ್ದ ಮತ್ತೆರೆಡು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು, ಮೂರ್ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ತಕ್ಷಣವೇ ಗಾಯಾಳುಗಳನ್ನು ಸ್ಥಳೀಯರು ಮತ್ತು ವಾಹನ ಸವಾರರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಸರಣಿ ಅಪಘಾತದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕಾರುಗಳು ಅಡ್ಡಾದಿಡ್ಡಿ ಬಿದ್ದಿದ್ದ ಪರಿಣಾಮ
ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಸ್ಥಳಕ್ಕೆ ಮದ್ದೂರು ಸಂಚಾರಿ ಪೋಲೀಸರು ತೆರಳಿ ಹೆದ್ದಾರಿಯಲ್ಲಿದ್ದ ವಾಹನಗಳನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.