ಬೆಂಗಳೂರು: ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಹಿರೀಯ ವಕೀಲರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗ ಮೂಲದ ಕೆ.ಟಿ. ಡಾಕಪ್ಪ ಮೃತ ವಕೀಲನಾಗಿದ್ದು, ಕಚೇರಿಯಿಂದ ಮನೆಗೆ ತೆರಳಲು ತಮ್ಮ ಕಾರು ನಿಲ್ಲಿಸಿದ್ದ ಜಾಗಕ್ಕೆ ಡಾಕಪ್ಪ ಅವರು ನಡೆದು ಬರುತ್ತಿದ್ದಾಗ ವೇಗವಾಗಿ ಬಂದ ಕೆಟಿಎಂ ಬೈಕ್ ಡಿಕ್ಕಿ ಹೊಡೆದಿದೆ. ಡಾಕಪ್ಪ ಅವರ ತಲೆಗೆ ಗಂಭೀರವಾಗ ಗಾಯಗಳಾಗಿದ್ದವು.ತಕ್ಷಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇನ್ನು ಅಪಘಾತದಲ್ಲಿ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಕಾರಿಗೂ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಸವಾರ ಆದಿತ್ಯ (21) ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಸವನಗುಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.