ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ.
ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ.
ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೋರ್ವ ಆರೋಪಿ ಲಲಿತ್ ಝಾ ನೀಲಂ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ ವೀಡಿಯೊಗಳನ್ನು ಚಿತ್ರೀಕರಿಸಿದ್ದು, ಮೊಬೈಲ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೋರ್ವ ಆರೋಪಿಯಾಗಿರುವ ವಿಕ್ಕಿ ಶರ್ಮಾ ಎಲ್ಲಾ ಆರೋಪಿಗಳಿಗೆ ಗುರ್ಗೋನ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದ ಎಂದು ತಿಳಿದುಬಂದಿದೆ.