ರಾಂಚಿ: ಜಾರ್ಖಂಡ್ನ ಧನ್ಬಾದ್ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹಣೆಯ ಮೇಲೆ ‘ಬಿಂದಿ’ ಇಟ್ಟುಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದ್ದು, ಅವಮಾನ ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಾಂಶುಪಾಲರು ಮತ್ತು ಶಿಕ್ಷಕರಿಬ್ಬರನ್ನು ಧನ್ಬಾದ್ ಪೊಲೀಸರು ಬಂಧಿಸಿದ್ದಾರೆ.
ಉಷಾ ಕುಮಾರಿ (16) ಹಣೆಗೆ ‘ಬಿಂದಿ’ ಹಾಕಿದ್ದಕ್ಕಾಗಿ ಶಾಲೆಯ ಪ್ರಾರ್ಥನೆಯ ಸಮಯದಲ್ಲಿ ಶಿಕ್ಷಕ ಅವಮಾನ ಮಾಡಿ, ಕಪಾಳಮೋಕ್ಷ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಗೆ ಬಂದ ಬಾಲಕಿ ಹನುಮಂತನಗರ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತೇತುಲಮರಿ ಪೊಲೀಸರನ್ನು ಉದ್ದೇಶಿಸಿ ಡೆತ್ನೋಟ್ ಬರೆದು ತನ್ನ ಸಮವಸ್ತ್ರದಲ್ಲಿ ಇಟ್ಟುಕೊಂಡಿದ್ದಳು. ಘಟನೆಗೆ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರೇ ಹೊಣೆ ಎಂದು ಪತ್ರದಲ್ಲಿ ಹೇಳಿದ್ದಾಳೆ. ಘಟನೆಯ ನಂತರ, ಆರೋಪಿ ಶಿಕ್ಷಕ ಮತ್ತು ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತನ ಕುಟುಂಬ ಸದಸ್ಯರು, ಸ್ಥಳೀಯರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ತೇತುಲಮರಿ ಪೊಲೀಸರು ಕಾನೂನು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಟ್ವೀಟ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ‘ಬಿಂದಿ’ ಧರಿಸಿ ಶಾಲೆಗೆ ಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಎನ್ಸಿಪಿಸಿಆರ್ ಈ ವಿಷಯವನ್ನು ಅರಿತುಕೊಂಡಿದ್ದು, ತಂಡವು ತನಿಖೆಗಾಗಿ ಧನ್ಬಾದ್ಗೆ ಹೋಗಲಿದೆ ಎಂದು ಅವರು ಹೇಳಿದರು.