ಹಾಸನ, ಜೂನ್ 27 : ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40 % ಕಮಿಷನ್ , ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪೊಲೀಸ್ ಪಿಎಸ್ಐ ನೇಮಕಾತಿ ಹಗರಣದ ತನಿಖೆ ಹಾಗೂ ಬಿಟ್ ಕಾಯಿನ್ ಗಳ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಚಾಮರಾಜನಗರದಲ್ಲಿ ಕೋವಿಡ್ ಸಂದರ್ಭದಲ್ಲಿ ಆಕ್ಷಿಜನ್ ಕೊರತೆಯಿಂದ ಉಂಟಾಗಿದ್ದ ದುರಂತ ಪ್ರಕರಣದ ಮರುತನಿಖೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಅಂದಿನ ಆರೋಗ್ಯ ಸಚಿವ ಡಾ: ಸುಧಾಕರ್ ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ ಅಲ್ಲಿ ಸತ್ತಿರುವವರ ಸಂಖ್ಯೆ ಹೆಚ್ಚಿತ್ತು ಎಂದರು.
ಗ್ಯಾರಂಟಿ ಯೋಜನೆಯ ಬಗ್ಗೆ ವಿಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದೇವೆ. ನಾವು ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುತ್ತೇವೆ. ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 15 ರ ನಂತರ ಜಾರಿ ಮಾಡಲಾಗುವುದು. ಈಗಾಗಲೇ ಅರ್ಜಿ ಕರೆದಿದ್ದು, ಅರ್ಜಿಗಳು ಸ್ವೀಕಾರವಾಗುತ್ತಿವೆ ಎಂದರು.