ಚೆನ್ನೈ: ಸನಾತನ ಧರ್ಮವು (Sanatana dharma) ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬೆನ್ನಲ್ಲೇ ಡಿಎಂಕೆ ಪಕ್ಷದ ಸಂಸದ ಎ.ರಾಜಾ (R Raja) ಹೆಚ್ಐವಿ (HIV), ಕುಷ್ಠರೋಗಕ್ಕೆ ಸನಾತನ ಧರ್ಮವನ್ನ ಹೋಲಿಸಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸನಾತನ ಧರ್ಮವನ್ನ ಹೆಚ್ಐವಿ ಮತ್ತು ಕುಷ್ಠರೋಗದಂತಹ (leprosy) ಸಾಮಾಜಿಕ ಕಳಂಕ ಹೊಂದಿರುವ ರೋಗಗಳಿಗೆ ಹೋಲಿಸಬೇಕು. ಸನಾತನ ಧರ್ಮ ಹಾಗೂ ವಿಶ್ವಕರ್ಮ ಯೋಜನೆಗಳು ಬೇರೆ-ಬೇರೆ ಇಲ್ಲ, ಅವೆರಡೂ ಒಂದೇ. ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಸ್ವಲ್ಪ ಮೃದು ಧೋರಣೆಯಿಂದ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳು ಸಮಾಜಿಕ ಕಳಂಕ ಹೊಂದಿಲ್ಲ. ಆದ್ರೆ ಕುಷ್ಠ ಮತ್ತು ಹೆಚ್ಐವಿ ರೋಗಗಳು ಸಮಾಜದಿಂದ ಕಳಂಕಿತವಾಗಿವೆ. ಹಾಗಾಗಿ ಸನಾತನ ಧರ್ಮವನ್ನ ಹೆಚ್ಐವಿ ಮತ್ತು ಕುಷ್ಠರೋಗದಂತ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಲೇವಡಿ ಮಾಡಿದ್ದಾರೆ. ಯಾರು ಯಾರನ್ನಾದರೂ ಕರೆದುಕೊಂಡು ಬರಲಿ, ಸನಾತನ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ನಾನು ಸಿದ್ಧ. ಅವರು ಯಾವುದೇ ಆಯುಧಗಳನ್ನ ಬೇಕಾದ್ರೆ ತೆಗೆದುಕೊಂಡು ಬರಲಿ. ಪ್ರಧಾನಿ ಮೋದಿ ಕ್ಯಾಬಿನೆಟ್ನಲ್ಲಿ ಸಭೆ ಕರೆದು ನನಗೆ ಅನುಮತಿ ಕೊಟ್ಟರೆ, ಅಲ್ಲಿಯೂ ಸನಾತನ ಧರ್ಮದ ಬಗ್ಗೆ ಉತ್ತರ ಕೊಡಲು ನಾನು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.