ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಸ್ಪೋಟವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಡಿ.ವಿ. ಸದಾನಂದಗೌಡ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಕಟ್ಟಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಸ್ ನಿಲ್ದಾಣದ ಬಳಿ ಕಿಡಿಗೇಡಿಗಳು ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ. ಸದಾನಂದಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಲಾಗಿದೆ. ಬ್ಯಾನರ್ ನಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ, ಇಂತಿ ಹಿಂದೂ ಕಾರ್ಯಕರ್ತರು ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಮುಖಂಡ ಅರುಣ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ವಿರುದ್ಧ 4 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಇದು ಬಿಜೆಪಿ ಸೋಲಿಗೆ ಕಾರಣ ಎಂದು ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ.ಸದಾನಂದಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.