ರಾಯಚೂರು: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ (Yadgir) ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ (Basava Sagar Dam) ಜೀವಕಳೆ ಬಂದಿದೆ. ಡೆಡ್ ಸ್ಟೋರೇಜ್ ದಾಟಿದ್ದ ಜಲಾಶಯ ಈಗ 80% ಭರ್ತಿಯಾಗಿದೆ.ನಿರಂತರ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಸುಮಾರು 1.50 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕೃಷ್ಣಾ ನದಿಗೆ ಬಸವಸಾಗರ ಜಲಾಶಯದ 24 ಗೇಟ್‍ಗಳ ಮೂಲಕ 1.80 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ (Krishna River) ರಿಲೀಸ್ ಮಾಡಲಾಗಿದೆ.
ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ
ಕೃಷ್ಣಾ ಎಡ ಹಾಗೂ ಬಲ ದಂಡೆಯ ಕಾಲುವೆಗಳ ಮೂಲಕ ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಇದರಿಂದಾಗಿ ಯಾದಗಿರಿ ಹಾಗೂ ರಾಯಚೂರು ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಜೊತೆಗೆ ನದಿ ತೀರದ ಗ್ರಾಮಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೇ ಮೈಕ್ ಮೂಲಕ ಜಾನುವಾರುಗಳನ್ನು ನದಿ ಸಮೀಪಕ್ಕೆ ಬಿಡದಂತೆ, ಜನರು ನದಿಗೆ ಇಳಿಯದಂತೆ, ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೂ ಮುನ್ನ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಬಸವಸಾಗರಕ್ಕೆ 1 ಲಕ್ಷದ 50 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಇದರಿಂದ ಇಂದು (ಶುಕ್ರವಾರ) ಬೆಳಿಗ್ಗೆ ಜಲಾಶಯದ 12 ಕ್ರಸ್ಟಗೇಟ್‍ಗಳನ್ನು ತೆರದು 1.80 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.
ಕಳೆದ 10 ದಿನದ ಹಿಂದೆ ಡೆಡ್ ಸ್ಟೋರೆಜ್ ಮಟ್ಟಕ್ಕೆ ಬಸವಸಾಗರ ಜಲಾಶಯ ತಲುಪಿತ್ತು. ಇದರಿಂದ ಕುಡಿಯಲು ಸಹ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಜಲಾಶಯ ಒಟ್ಟು 492.25 ಮೀಟರ್ ಇದ್ದು, ಸದ್ಯ 490 ಮೀ ನೀರು ತುಂಬಿದೆ. 33.31 ಟಿಎಂಸಿ ಯಷ್ಟು ಸಾಮರ್ಥ್ಯ ಹೊಂದಿರುವ ಡ್ಯಾಂ ಈಗ 26.70 ಟಿಎಂಸಿ ನೀರು ತುಂಬಿದೆ.