ಪ್ರತ್ಯೇಕ ಸ್ಮಶಾನ ಭೂಮಿ ನೀಡುವಂತೆ ಗ್ರಾಮಗಳಿಂದ ಮನವಿ ಬಂದಿದೆ ಎಂದು ಬೆಂಗಳೂರಿನ ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸಲ್ಲಿಸಿದ ಪ್ರಮಾಣ ಪತ್ರ ಸಲ್ಲಿಸಿದರು. ಸ್ಮಶಾನ ಜಾಗವಿಲ್ಲದ ಗ್ರಾಮಗಳ ಅಗತ್ಯ ಜಮೀನು ಕೋರುವಂತೆ ತಿಳಿಸಿ ಈ ಹಿಂದೆ ಸರ್ಕಾರ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರ ಪರಿಣಾಮ ಕೆಲ ಸ್ಥಳೀಯ ನಿವಾಸಿಗಳು ಸ್ಮಶಾನಕ್ಕೆ ಹೆಚ್ಚುವರಿ ಜಮೀನು ಒದಗಿಸುವಂತೆ ಕೋರಿದ್ದಾರೆ. ಮತ್ತಷ್ಟು ಜನರು ತಮ್ಮ ಧರ್ಮದವರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಒದಗಿಸುವಂತೆ ತಿಳಿಸಿದ್ದಾರೆ. ಅವರ ಮನವಿಗಳನ್ನು ಕಾನೂನು ಪ್ರಕಾರ ಪರಿಶೀಲನೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ಒತ್ತುವರಿ ಸೇರಿದಂತೆ ಭವಿಷ್ಯದಲ್ಲಿ ಉದ್ಭವಿಸುವ ಇತರೆ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಸ್ಮಶಾನ ಭೂಮಿಯನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆ ಸಂಬಂಧ ಕಂದಾಯ ದಾಖಲೆಗಳ ನೋಂದಣಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ೧೬ ಜಿಲ್ಲೆಗಳ ೬೦೬ ಗ್ರಾಮಗಳ ಜಮೀನನ್ನು ಶೀಘ್ರವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಹೈಕೋರ್ಟ್‌ಗೆ ಸರ್ಕಾರ ಭರವಸೆ ನೀಡಿದೆ.