ರಿಷಬ್ ಪಂಥ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉತ್ತರಾಖಂಡದ ರೂರ್ಕಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಅವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು.ಆದರೆ ತೀವ್ರ ಗಾಯಗೊಂಡ ಅವರು ಈ ವರ್ಷವಿಡೀ ಕ್ರಿಕೆಟ್‌ನಿಂದ ದೂರವಿರಬೇಕಾಯಿತು. ‘ಕೆಲವು ತಿಂಗಳ ಹಿಂದೆ ಇದ್ದುದಕ್ಕಿಂತ ಈಗ ನಾನು ಬಹಳಷ್ಟು ಸುಧಾರಿಸಿಕೊಂಡಿದ್ದೇನೆ.
ಪೂರ್ಣ ಗುಣಮುಖನಾಗುವ ಹಾದಿಯಲ್ಲಿದ್ದೇನೆ. ಇನ್ನು ಕೆಲವೇ ತಿಂಗಳು ಬೇಕಾಗಬಹುದು’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ 26 ವರ್ಷದ ಪಂತ್ ಹೇಳಿದ್ದಾರೆ. ಐಪಿಎಲ್ ವೇಳೆಗೆ ಅವರು ಆಡಲು ಸಜ್ಜಾಗಬಹುದು ಎಂಬ ನಿರೀಕ್ಷೆಯಿದೆ.
‘ಈ ಮಧ್ಯೆ ಅಭಿಮಾನಿಗಳ ಪ್ರೀತಿಯಿಂದ ಪುಳಕಿತನಾಗಿದ್ದೇನೆ. ಮೊದಲ ಬಾರಿ ಅಭಿಮಾನಿಗಳಿಂದ ಈ ರೀತಿಯ ಪ್ರೀತಿಯನ್ನು ಕಂಡೆ. ನನ್ನ ಚೇತರಿಕೆಯಲ್ಲಿ ಅವರ ಪ್ರೀತಿಯೂ ಪಾತ್ರವಹಿಸಿದೆ’ ಎಂದಿದ್ದಾರೆ ಪಂತ್.
ಕಳೆದ ಸಾಲಿನಲ್ಲಿ ಪಂತ್ ಅವರ ಗೈರಿನಲ್ಲಿ ಡೇವಿಡ್ ವಾರ್ನರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ತಂಡ ಕೊನೆಯಿಂದ ಎರಡನೇ ಸ್ಥಾನ ಪಡೆದಿತ್ತು.