ಬಾಲಿವುಡ್ ಬ್ಯೂಟಿ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಲಿವುಡ್ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ಪಿಗ್ಗಿ ಇದರ ಜೊತೆಗೆ ಮಗಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಗಳ ಒಳಿತಿಗಾಗಿ ದೇಶ ಬಿಡಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹಿಂದಿ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ಪ್ರಿಯಾಂಕಾ ಚೋಪ್ರಾ, ಬೇಡಿಕೆಯಿರುವಾಗಲೇ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿಯಿದ್ದರು ಕೂಡ ಮಗಳಿಗಾಗಿ ಬಿಡುವು ಮಾಡಿಕೊಂಡು ಸಮಯ ಕಳೆಯುತ್ತಾರೆ. ಪ್ರಿಯಾಂಕಾ ದಂಪತಿ, ಮಗುವಿನ ಫೋಟೋವನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನೂ ಮಗಳ ಭವಿಷ್ಯಕ್ಕಾಗಿ ಪ್ರಿಯಾಂಕಾ ಚೋಪ್ರಾ ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಂಕಾ 17ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ-ತಾಯಿ ಬರೇಲಿಯಲ್ಲಿ ಆಸ್ಪತ್ರೆ ನಡೆಸುತ್ತಿದ್ದರು. ಆದರೆ ಮಗಳ ಭವಿಷ್ಯಕ್ಕಾಗಿ ಅವರು ಎಲ್ಲವನ್ನೂ ತೊರೆದು ಮುಂಬೈಗೆ ಶಿಫ್ಟ್ ಆಗಿದ್ದರು. ಆ ಸಂದರ್ಭವನ್ನು ಪ್ರಿಯಾಂಕಾ ಚೋಪ್ರಾ ಅವರು ಈಗ ನೆನಪಿಸಿಕೊಂಡಿದ್ದಾರೆ. ನನ್ನ ತಂದೆ-ತಾಯಿಯಂತೆಯೇ ನನ್ನ ಮಗಳಿಗಾಗಿ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಅಂದು ಅಪ್ಪ-ಅಮ್ಮನ ತ್ಯಾಗವನ್ನು ನಾನು ಹಗುರವಾಗಿ ತೆಗೆದುಕೊಂಡೆ. ಅದು ಅವರ ಕೆಲಸ ಅಂತ ಭಾವಿಸಿದ್ದೆ. ನನಗೆ ನನ್ನ ಭವಿಷ್ಯ ಮುಖ್ಯವಾಗಿತ್ತು. ನಾನು ಒಂದು ಪುಸ್ತಕ ಬರೆಯುವವರೆಗೂ ಅವರ ತ್ಯಾಗದ ಬಗ್ಗೆ ನಾನು ಯೋಚಿಸಿರಲಿಲ್ಲ. ಈಗ ನನಗೆ 40 ವರ್ಷ ವಯಸ್ಸಾಗಿದೆ. ಮಗಳಿಗಾಗಿ ನನ್ನ ಕೆಲಸ ಬಿಟ್ಟು, ಬೇರೆ ದೇಶಕ್ಕೆ ಹೋಗಬೇಕಾದ ಪ್ರಸಂಗ ಬಂದರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ ಎಂದು ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.