ಬೆಂಗಳೂರು: “ಈಶ್ವರಪ್ಪನವರ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ.ಕೆ. ಸುರೇಶ್ ಅವರ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.ನಗರದ ಖಾಸಗಿ ಹೋಟೇಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ಸಂದರ್ಭದಲ್ಲಿ ಮಾಧ್ಯಮಗಳು, ಸಂಸದ ಡಿ ಕೆ ಸುರೇಶ್ ಅವರಿಗೆ ಗುಂಡಿಕ್ಕುವ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಮಾತನಾಡಿದರು.
“ಅವರಿಗೆ ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಸದನದಲ್ಲಿ ನಮ್ಮ ತಂದೆ ಬಗ್ಗೆ ಮಾತನಾಡಿದ್ದರು. ಅದಕ್ಕೆ ಒಂದು ಸುತ್ತಿನ ಸೆಟ್ಲಮೆಂಟ್ ಮಾಡಿದ್ದೇವೆ. ಈಶ್ವರಪ್ಪ ಈಗ ಎಲ್ಲಿದ್ದಾರೆ? ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ. ಈಶ್ವರಪ್ಪ ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ. ಅವರ ಹೇಳಿಕೆಗೆ ನಡುಗುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಪೂರ್ವಜರಾದ ಕೆಂಪೇಗೌಡರ ಇತಿಹಾಸ ಗೊತ್ತಿದೆಯೇ? ನಮಗೆ ನಮ್ಮದೇ ಆದ ಇತಿಹಾಸವಿದೆ. ನಾವು ಕಿವಿ ಮೇಲೆ ಹೂವ ಇಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ” ಎಂದು ತಿರುಗೇಟು ನೀಡಿದರು.