ಬೆಂಗಳೂರು: ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂದು ರಾಜ್ಯಸಭಾ ಸದ್ಯಸ ರಾಜೀವ್ ಶುಕ್ಲಾ(Rajeev Shukla) ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ(KPCC) ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿ ನಮ್ಮ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಬೀಳಿಸಿತ್ತು. ಹೀಗಾಗಿ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಕಾಂಗ್ರೆಸ್ ಪ್ರಚಂಡ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದ್ದು, ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾವು ಹಿಮಾಚಲ ಪ್ರದೇಶದಲ್ಲೂ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದು, ಅವುಗಳನ್ನು ಜಾರಿ ಮಾಡುತ್ತಿದ್ದೇವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಮಹಿಳೆಯರಿಗೆ 1500 ರೂ. ಉಚಿತ ವಿದ್ಯುತ್, ರೈತರಿಗೆ ಬೆಂಬಲ ಬೆಲೆ ಕುರಿತ ಭರವಸೆಯನ್ನು ಹಿಮಾಚಲ ಪ್ರದೇಶದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದರು.
ನಿನ್ನೆ ಬಿಜೆಪಿ ಪ್ರಮುಖ ನಾಯಕರ ಮಾತು ಕೇಳುತ್ತಿದ್ದೆ. ನಿಮಗೆ ಮೋದಿ ಅವರ ಆಶೀರ್ವಾದ ಬೇಕು ಎಂದರೆ ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಾರೆ. ಅವರೇನು ದೇವರೇ? ನಿಮ್ಮ ಬಳಿ ರಾಜ್ಯದ ಯಾವುದೇ ನಾಯಕರಿಲ್ಲವೇ? ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಮಾಡುತ್ತಾರಾ? ಅವರು ರಾಜ್ಯದ ಯಾವುದೇ ನಾಯಕರ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಹೆಸರು ಹೇಳುತ್ತಾ ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಬಹುದಾದ ಅಪಮಾನ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ರಾಜೀವ್ ಶುಕ್ಲಾ ಕಿಡಿಕಾರಿದರು.