ರಾಮಮಂದಿರ ಟೀಕಿಸುವ ಭರದಲ್ಲಿ ಐಶ್ವರ್ಯಾ ರೈಗೆ ರಾಹುಲ್ ಗಾಂಧಿ ಅವಮಾನ..!

 ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಅನೇಕ ನಟಿಯರು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿಕಾರಿದ್ದು, ಕರ್ನಾಟಕ ಬಿಜೆಪಿ ಕೂಡ ವಾಗ್ದಾಳಿ ನಡೆಸಿದೆ. ರಾಜಕೀಯ ಲಾಭಕ್ಕಾಗಿ ಮಹಿಳೆಯರನ್ನು ಶೋಷಿಸುವ ರಾಜಕಾರಣಿಗಳ ದುರಭ್ಯಾಸದ ವಿರುದ್ಧ ಗಾಯಕಿ ಸೋನಾ ಮೊಹಾಪಾತ್ರ ಟೀಕಾಪ್ರಹಾರ ನಡೆಸಿದ್ದಾರೆ. ನಟಿ ಐಶ್ವರ್ಯಾ ರೈ ಅವರ ನಿಂದನೆಯು ಕನ್ನಡತಿಗೆ ಮಾಡಿದ ಅವಮಾನ ಎಂದು ರಾಜ್ಯ ಬಿಜೆಪಿ ಹೇಳಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

ಜನವರಿ 22ರಂದು ಅಯೋಧ್ಯಾದಲ್ಲಿ ನಡೆದ ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಹೆಸರು ಪ್ರಸ್ತಾಪಿಸಿದ್ದರು. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರೆಲ್ಲ ಬಂದಿದ್ದರು ಎಂದು ಟೀಕಿಸಿದ್ದರು.

“ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನೀವು ನೋಡಿದ್ದಿರಾ? ಅಲ್ಲಿ ಒಂದೇ ಒಂದು ಒಬಿಸಿ ಮುಖ ಇತ್ತೇ? ಅಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ನರೇಂದ್ರ ಮೋದಿ ಇದ್ದರು” ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾನುವಾರ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹೇಳಿದ್ದರು. “ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 73ರಷ್ಟಿರುವ ಜನರು ಸಮಾರಂಭದಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ಅವರಿಗೆ ದೇಶದ ಆಡಳಿತ ಸಿಗುವುದನ್ನು ಬಿಜೆಪಿ ಎಂದಿಗೂ ಬಯಸಿಲ್ಲ” ಎಂದು ಆರೋಪಿಸಿದ್ದರು.

ಇದರ ನಂತರ ನಡೆದ ಮತ್ತೊಂದು ರಾಲಿಯಲ್ಲಿ ಕೂಡ ಐಶ್ವರ್ಯಾ ಹೆಸರನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. “ಟೆಲಿವಿಷನ್ ಚಾನೆಲ್‌ಗಳು ಐಶ್ವರ್ಯಾ ಅವರು ನರ್ತಿಸುವುದು ಮತ್ತು ಬಚ್ಚನ್ ಸಾಬ್ ಭಲ್ಲೆ ಭಲ್ಲೆ ಮಾಡುವುದನ್ನು ಮಾತ್ರ ತೋರಿಸುತ್ತವೆ. ಬಡ ಜನರ ಕುರಿತು ಅವರು ಏನನ್ನೂ ತೋರಿಸುವುದಿಲ್ಲ. ಬಿಜೆಪಿ/ ಆರೆಸ್ಸೆಸ್‌ನ ಹಣ ಪಡೆದು ಟ್ರೋಲ್ ಮಾಡುವವರು ತಮ್ಮ ಕೊಳಕು ಭಾಷೆಗಳಿಂದ ಐಶ್ವರ್ಯಾ ರೈ ಅವರನ್ನು ನರ್ತಕಿ ಎಂದು ಕರೆಯುತ್ತಾರೆ” ಎಂದಿದ್ದರು. ಆದರೆ ಐಶ್ವರ್ಯಾ ರೈ ಅವರು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಆದರೂ ಅವರ ಹೆಸರನ್ನು ರಾಹುಲ್ ಗಾಂಧಿ ಎಳೆದು ತಂದಿರುವುದು ವಿವಾದಕ್ಕೆ ಕಾರಣವಾಗಿದೆ.

Loading

Leave a Reply

Your email address will not be published. Required fields are marked *