ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ಮರಳಿದ್ದ ಇಶಾನ್ ಕಿಶನ್ ಅವರ ಬಗ್ಗೆ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಇಶಾನ್ ಕಿಶನ್, ಸೀಮಿತ ಓವರ್ಗಳ ಸ್ವರೂಪದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.
ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಅವರು ತವರಿಗೆ ಮರಳಿದ್ದರು.
ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಆರಂಭಿಕ ಎರಡು ಟೆಸ್ಟ್ ಪಂದ್ಯಗಳ ಭಾರತ ತಂಡದಲ್ಲಿ ಅವರಿಗೆ ಅವಕಾಶ ನೀಡಲಾಗಿರಲಿಲ್ಲ. ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ದ್ರಾವಿಡ್, ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಇಶಾನ್ ಕಿಶನ್ ಅವರು ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಬೇಕು ಎಂದು ಹೇಳಿದ್ದರು.
ವೈಝಾಗ್ ಟೆಸ್ಟ್ ಗೆಲುವಿನ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ದ್ರಾವಿಡ್ಗೆ ಪತ್ರಕರ್ತರು ಇಶಾನ್ ಕಿಶನ್ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದ್ರಾವಿಡ್, ಕ್ರಿಕೆಟ್ ಆರಂಭಿಸುವುದು ಅಥವಾ ಬಿಡುವುದು ಇಶಾನ್ ಕಿಶನ್ಗೆ ಬಿಟ್ಟಿದ್ದು, ಟೀಮ್ ಮ್ಯಾನೇಜ್ಮೆಂಟ್ ಯಾರನ್ನೂ ಬಲವಂತ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.