ಮೈಸೂರು: ತಲೆಯ ಮೇಲೆ ಟೋಪಿ ಹಾಕಿಕೊಂಡವರನ್ನ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ಸಿಗರು ಅಂತ ಕರೆಯುತ್ತಿದ್ದರು. ಈಗ ಅದೇ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಲೋಕಸಭಾ ಚುನಾವಣೆಯ ವರೆಗೆ ಟೋಪಿ ಹಾಕುತ್ತಿದೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವಂತ ಗ್ಯಾರಂಟಿಗಳ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಚುನಾವಣೆ ಪೂರ್ವದಲ್ಲಿ ಮನೆ ಬಾಗಿಲಿಗೆ ಗ್ಯಾರಂಟಿ ಕಾರ್ಡ್ ತಲುಪಿಸಿದ್ದರು. ಎಲ್ಲರಿಗೂ ಫ್ರೀ ಅಂತ ಹೇಳಿದ್ದರು. ಆದ್ರೇ ಈಗ ಷರತ್ತುಗಳನ್ನು ವಿಧಿಸಿ ಮೋಸ ಮಾಡಿದೆ ಎಂದರು.
ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವೆಂದು ಎಸಿ, ಸ್ಪೀಪರ್, ಐಶಾರಾಮಿ ಬಸ್ ಹೊರತುಪಡಿಸಿ ಎಂದು ಷರತ್ತು ವಿಧಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಒಡತಿಯನ್ನು ಮನೆಯವರೆ ತೀರ್ಮಾನಿಸುವಂತೆ ತಿಳಿಸಿದೆ. ಹಿಂದೂಗಳ ಮನೆಗಳಲ್ಲಿ ಅತ್ತೆ-ಸೊಸೆ ನಡುವೆ ಜಗಳ ತಂದಿಡುವಂತ ಕೆಲಸ ಮಾಡುತ್ತಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರವು ಭಿಕ್ಷಾ ರಾಜ್ಯ ಮಾಡಲಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.