ಕೊಪ್ಪಳ: ಗಂಗಾವತಿ (Gangavati) ನಗರದ ಗಾಂಧಿ ಸರ್ಕಲ್ ಸಮೀಪ ಇರುವ ದೊಡ್ಡ ಜಾಮಿಯಾ ಮಸೀದಿ (Masjid) ಮುಂದೆ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ವೇಳೆ ಮಸೀದಿ ಮುಂದೆ ಪೂಜೆ ಮಾಡಿದ ಕಾರಣ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೆ.28 ರಂದು ಗಂಗಾವತಿಯ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ವೇಳೆಯಲ್ಲಿ ಯುವಕರು ಮಸೀದಿ ಎದುರು ಮಂಗಳಾರತಿ ಮಾಡಿ, ‘ಗವಿ ಗಂಗಾಧರೇಶ್ವರ ಮಹಾ ರಾಜಕೀ ಜೈ’ ಎಂದು ಘೋಷಣೆ ಕೂಗಿದ ವೀಡಿಯೋ ವೈರಲ್ ಆಗಿತ್ತು.
ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತದೆ ಎನ್ನುವ ಕಾರಣಕ್ಕೆ ಸೆ.30 ರಂದು ಮಂಗಳಾರತಿ ಮಾಡಿದ 4 ಜನರ ಮೇಲೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಾಗಿತ್ತು. ಈ ಪ್ರರಕಣ ಇನ್ನೂ ಹಸಿ ಇರುವಾಗಲೇ ಮತ್ತೆ ಅದೇ ಮಸೀದಿಯ ಮುಂದೆ ಮಂಗಳವಾರ ರಾತ್ರಿ ವೇಳೆ ಕೂಡ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡದವರು, ಯುವಕರು ಮಸೀದಿಯ ಮುಂದೆಯ ರಸ್ತೆಯಲ್ಲಿ ರಂಗೋಲಿ ಹಾಕಿ, ಬೆಂಕಿ ಹಚ್ಚಿ, ಕುಂಬಳಕಾಯಿ ಹೊಡೆಯಲು ಮುಂದಾಗಿದ್ದರು. ಅದಕ್ಕೆ ಕೋಪಗೊಂಡಿದ್ದ ಮುಸ್ಲಿಂ ಸಮಾಜದವರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿತ್ತು.