ಬೆಂಗಳೂರು: 14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದ ತೆರಿಗೆ ಹಂಚಿಕೆ ಅನ್ಯಾಯದಿಂದ ರಾಜ್ಯಕ್ಕೆ ಒಟ್ಟು 1,87,867 ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಆಗಿರುವ ಅನುದಾನ ಅನ್ಯಾಯದ ವಿರುದ್ಧ ಫೆ.7ರಂದು ದೆಹಲಿ ಜಂತರ್ ಮಂಥರ್ ನಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದು, ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ.
ಕೇಂದ್ರ ಸರ್ಕಾರದ, ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ. ಅನಿವಾರ್ಯ ಕಾರಣದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಪ್ರತಿಭಟನೆ ಬಿಜೆಪಿ ವಿರುದ್ಧ ಮಾಡುವ ಪ್ರತಿಭಟನೆ ಅಲ್ಲ. ಇದು ರಾಜಕೀಯ ಪ್ರತಿಭಟನೆ ಅಲ್ಲ.ದೇಶದ ಜನರ ಗಮನ ಸೆಳೆಯಲು, ಕೇಂದ್ರ ಮಲತಾಯಿ ಧೋರಣೆ, ತಾರತಮ್ಯದ ಬಗ್ಗೆ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯಲ್ಲಿ ಎಲ್ಲ ಮಂತ್ರಿಗಳು, ಕೈ ಶಾಸಕರು ಭಾಗವಹಿಸುತ್ತಿದ್ದಾರೆ ಎಂದರು.
ಇಲ್ಲಿವರೆಗೆ 15 ಹಣಕಾಸು ಆಯೋಗ ಆಗಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 42% ತೆರಿಗೆ ಹಂಚಿಕೆ ಮಾಡಿದ್ದರು. 15ನೇ ಹಣಕಾಸು ಆಯೋಗದಲ್ಲಿ ಅದು 41% ಗೆ ಇಳಿಯಿತು. 14ನೇ ಹಣಕಾಸು ಆಯೋಗದಲ್ಲಿ ಇದ್ದ 4.71% ತೆರಿಗೆ ಪಾಲು 15ನೇ ಹಣಕಾಸು ಆಯೋಗದಲ್ಲಿ ಅದು 3.64% ಗೆ ಇಳಿಕೆ ಆಗಿದೆ. ಅಂದರೆ 1.7% ಕಡಿತವಾಗಿದೆ. ನಾಲ್ಕು ವರ್ಷದಲ್ಲಿ 45 ಸಾವಿರ ಕೋಟಿ ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆಯಾಗಿದೆ. ಐದು ವರ್ಷದಲ್ಲಿ ಒಟ್ಟು 62 ಸಾವಿರ ಕೋಟಿ ತೆರಿಗೆ ಪಾಲು ಕಡಿಮೆಯಾಗಿದೆ ಎಂದು ಕಿಡಿ ಕಾರಿದರು.