ಬೆಳಗಾವಿ: ಫಾಲ್ಸ್ ನೋಡಲು ಹೋಗಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ಸವಾರನನ್ನು ರಕ್ಷಿಸಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವಿನಾಯಕ ಬುತ್ತುಲ್ಕರ್ ರಕ್ಷಣೆ ಮಾಡಲಾದ ವ್ಯಕ್ತಿ. ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರ ಜೊತೆಗೆ ಬಂದಿದ್ದಾಗ ವಿನಾಯಕ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದಿದ್ದರು. ಬೈಕ್ ಮೇಲೆ ಹೋಗುವಾಗ ಆಯತಪ್ಪಿ ನೂರು ಅಡಿ ಪ್ರಪಾತಕ್ಕೆ ಬಿದ್ದಿದ್ದರು.
ಇದನ್ನು ಗಮನಿಸಿದ್ದ ಸ್ನೇಹಿತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿ ವಿನಾಯಕ್ನನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿನಾಯಕ್ಗೆ ಮುಖ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.