ಬೆಂಗಳೂರು;- ಬಿಬಿಎಂಪಿಯಿಂದ 29 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ನಮ್ಮ ಕ್ಲಿನಿಕ್, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಅದರೊಂದಿಗೆ ಇದೀಗ ವಿಧಾನಸಭಾ ಕ್ಷೇತ್ರವಾರು ತಲಾ ಒಂದು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ ಮಾಡುವುದು ಹಾಗೂ ಪಾಲಿಕೆಯ 8 ವಲಯದಲ್ಲಿ ತಲಾ 1 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವ ಬಗ್ಗೆ ಬಿಬಿಎಂಪಿ ಆರೋಗ್ಯ ವಿಭಾಗದಿಂದ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಈಗಾಗಲೇ ಪಶ್ಚಿಮ ವಲಯದ ಎಂಸಿ ಲೇಔಟ್ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದೆ. ಹಾಗಾಗಿ, ಉಳಿದ ಏಳು ವಲಯದಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ₹100 ಕೋಟಿ ಯೋಜನೆ ಸಿದ್ಧಪಡಿಸಿಲಾಗಿದೆ.
ಇನ್ನು ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ವಿಧಾನಸಭಾ ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇವೆ. ಉಳಿದ 21 ವಿಧಾನಸಭಾ ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ₹70 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದೆ.
ರಾಜ್ಯದ ಪ್ರತಿ ತಾಲೂಕಿನಲ್ಲಿ ತಾಲೂಕು ಸಾರ್ವಜನಿಕರ ಆರೋಗ್ಯ ಕೇಂದ್ರಗಳಿವೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಕಡೆ ಆಸ್ಪತ್ರೆಗಳಿಲ್ಲ. ಹೀಗಾಗಿ, ತಾಲೂಕು ಆಸ್ಪತ್ರೆ ಮಾದರಿಯಲ್ಲಿ ವಿಧಾನಸಭಾ ಕ್ಷೇತ್ರವಾರು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.