ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ಮಧ್ಯೆ ಮಾರಾಮಾರಿ ನಡೆದಿದ್ದು, ಹಿರಿಯ ಸಹೋದರನ ಹೊಡೆತಕ್ಕೆ ಕಿರಿಯ ಸಹೋದರ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರಪ್ಪ ಕಮ್ಮಾರ ಹಾಗೂ ಅಶೋಕ ಕಮ್ಮಾರ ಎಂಬುವ ಸಹೋದರರ ಕುಟುಂಬಗಳ ಮಧ್ಯೆ ಈ ಮಾರಾಮಾರಿ ನಡೆದಿದೆ. ಮನೆ ಹಾಗೂ ಹೊಲದ ವಿಚಾರಕ್ಕೆ ಸಂಬಂಧಿಸಿದಂತೆ ಈ ಮಾರಾಮಾರಿ ನಡೆದಿದೆ.
ಕಲ್ಲು, ಬಡಿಗೆಗಳಿಂದ ಈ ಎರಡೂ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದು, ಅಶೋಕ ಕಮ್ಮಾರ (50) ಹಾಗೂ ಫಕ್ಕೀರಪ್ಪ ಕಮ್ಮಾರ (55) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದರು. ಈ ವೇಳೆ ಅಶೋಕಗೆ ಹೆಚ್ಚಿನ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಶೋಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಫಕ್ಕೀರಪ್ಪನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಇನ್ನೂ ಹಲವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.