ಮಂಡ್ಯ : ಜೆಡಿಎಸ್ ನಲ್ಲಿ ದೇವೇಗೌಡರ ಮಾತಿಗೆ ಈಗ ಕಿಮ್ಮತ್ತಿಲ್ಲ. ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಅವರ ಪಕ್ಷದವರೇ ಇನ್ನೊಂದು ಪಕ್ಷದ ಕೈ ಕೆಳಗೆ ಇಡುತ್ತಿದ್ದಾರೆ ಎಂದರೆ ನಾವ್ಯಾಕೆ ಬೇಡ ಎನ್ನೋಣ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ,
ದೇವೇಗೌಡರು ಇದುವರೆಗೂ ಪಕ್ಷವನ್ನು ಇನ್ನೊಂದು ಪಕ್ಷದೊಂದಿಗೆ ವಿಲೀನ ಮಾಡುವ ನಿರ್ಧಾರ ತೆಗೆದುಕೊಂಡ ನಿದರ್ಶನವೇ ಇಲ್ಲ. 10 ಸ್ಥಾನಗಳಲ್ಲಿ ಗೆಲ್ಲಲಿ, 3 ಸ್ಥಾನ ಗೆಲ್ಲಲಿ ಅಥವಾ 50 ಸ್ಥಾನಗಳಲ್ಲೇ ಗೆಲ್ಲಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂದು ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಅವರ ಪಕ್ಷದವರೇ ಬೇರೆ ಪಕ್ಷಕ್ಕೆ ಕೊಡುತ್ತಿದ್ದಾರೆ ಎಂದರೆ ಅದು ಅವರ ಪಕ್ಷದ ತೀರ್ಮಾನ. ಇದನ್ನು ಬೇಡ ಎನ್ನಲು ನಾವ್ಯಾರು ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಲು ಹೊರಟಿವೆ. ಕಾಂಗ್ರೆಸ್ ಪಕ್ಷಕ್ಕೆ ಒಬ್ಬರು ಪೈಪೋಟಿ ಕೊಡಲು ಸಾಧ್ಯವಿಲ್ಲವೆಂದು ಇಬ್ಬರು ಸೇರುತ್ತಿದ್ದಾರೆ. ಅವರ ಮೈತ್ರಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯ ಭರವಸೆಗಳನ್ನು ನಂಬಲಿಲ್ಲ. ಜೆಡಿಎಸ್ʼನ ಪಂಚರತ್ನ ಯೋಜನೆಯನ್ನೂ ನಂಬಲಿಲ್ಲ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನು ನಂಬಿದರು. ನಾವು ಅವುಗಳನ್ನು ಜಾರಿಗೊಳಿಸಿದ್ದೇವೆ. ಇದರಿಂದ ಎರಡೂ ಪಕ್ಷದವರು ಹತಾಶರಾಗಿದ್ದಾರೆ ಎಂದು ಕುಟುಕಿದರು.