2 ದಶಕಗಳ ಬಳಿಕ ಚೆಸ್ ವಿಶ್ವಕಪ್ ಗೆದ್ದ ಭಾರತೀಯ ಎಂಬ ಇತಿಹಾಸ ಸೃಷ್ಟಿಸುವ ಯುವ ಚದುರಂಗ ಚತುರ ಆರ್.ಪ್ರಜ್ಞಾನಂದ ಅವರ ಕನಸು ಭಗ್ನಗೊಂಡಿದೆ. ಗುರುವಾರ ನಡೆದ ಫೈನಲ್ನ ಟೈ ಬ್ರೇಕರ್ನಲ್ಲಿ ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ 18ರ ಪ್ರಜ್ಞಾನಂದ 0.5-1.5 ಅಂಕಗಳ ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕಾರ್ಲ್ಸನ್ ಚೊಚ್ಚಲ ಬಾರಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟರು.
ನಾರ್ವೆಯ ಅನುಭವಿ ಆಟಗಾರನ ವಿರುದ್ಧದ ಮಂಗಳವಾರ ಹಾಗೂ ಬುಧವಾರ ನಡೆದಿದ್ದ 2 ಸುತ್ತಿನ ಹಣಾಹಣಿ ಡ್ರಾಗೊಂಡಿತ್ತು. ಹೀಗಾಗಿ ಚೆಸ್ ವಿಶ್ವಕಪ್ ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಗುರುವಾರ ಟೈ ಬ್ರೇಕರ್ ನಡೆಸಲಾಯಿತು. ಟೈ ಬ್ರೇಕರ್ನ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ತಮಿಳುನಾಡಿನ ಪ್ರಜ್ಞಾನಂದ, 47 ನಡೆಗಳ ಬಳಿಕ ಕಾರ್ಲ್ಸನ್ಗೆ ಶರಣಾದರು.
2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾದರೆ, ಕಾರ್ಲ್ಸನ್ಗೆ ಡ್ರಾ ಸಾಧಿಸಿದರೂ ಸಾಕಿತ್ತು. 2ನೇ ಸುತ್ತಿನಲ್ಲಿ ಪ್ರಜ್ಞಾನಂದ ಕೊಂಚ ಪ್ರತಿರೋಧ ತೋರಿದ ಹೊರತಾಗಿಯೂ ಕೇವಲ 22 ನಡೆಗಳ ಬಳಿಕ ಡ್ರಾಗೊಂಡಿತು.ಲೀಗ್ ಹಂತದಲ್ಲಿ ಪ್ರಜ್ಞನಾಂದ ವಿಶ್ವ ನಂ.2 ಅಮೆರಿಕದ ಹಿಕರು ನಕಮುರಾ ಹಾಗೂ ವಿಶ್ವ ನಂ.2 ಫ್ಯಾಬಿಯಾನೋ ವಿರುದ್ಧ ಗೆದ್ದಿದ್ದರು. ಆದರೆ ಫೈನಲ್ಗೆ ಅವರಿಗೆ ವಿಶ್ವದ ಅಗ್ರ ಆಟಗಾರನ ಸವಾಲು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.