ಲಾಹೋರ್ : ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಅಧ್ಯಕ್ಷ ಇಮ್ರಾನ್ ಖಾನ್ ಬುಧವಾರ ಲಾಹೋರ್’ನಲ್ಲಿರುವ ತಮ್ಮ ಜಮಾನ್ ಪಾರ್ಕ್ ನಿವಾಸವನ್ನ ಪೊಲೀಸರು ಸುತ್ತುವರೆದಿದ್ದಾರೆ, ಮತ್ತೆ ನನ್ನನ್ನ ಬಂಧಿಸಬಹುದು ಎಂದು ಹೇಳಿದರು.
‘ಬಹುಶಃ ನನ್ನ ಮುಂದಿನ ಬಂಧನಕ್ಕೆ ಮೊದಲು ನನ್ನ ಕೊನೆಯ ಟ್ವೀಟ್. ಪೊಲೀಸರು ನನ್ನ ಮನೆಯನ್ನ ಸುತ್ತುವರೆದಿದ್ದಾರೆ’ ಎಂದು ಪಿಟಿಐ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಅವರನ್ನ 10 ವರ್ಷಗಳ ಕಾಲ ಜೈಲಿನಲ್ಲಿಡಲು ಸರ್ಕಾರ ಯೋಜಿಸುತ್ತಿದೆ ಎಂದು ಇಮ್ರಾನ್ ಖಾನ್ ‘ಲಂಡನ್ ಯೋಜನೆ’ ಬಗ್ಗೆ ಮಾತನಾಡಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನು ಇಮ್ರಾನ್ ಪತ್ನಿ ಬುಶ್ರಾ ಬೇಗಂ ಕೂಡ ಅವರನ್ನ ಜೈಲಿಗೆ ಹಾಕಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು.
ಸೋಮವಾರ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ತಾನು ಜೈಲಿನಲ್ಲಿದ್ದಾಗ ನಡೆದ ಹಿಂಸಾಚಾರದ ನೆಪವನ್ನ ಬಳಸಿಕೊಂಡು ಅಧಿಕಾರಿಗಳು ನ್ಯಾಯಾಧೀಶರು, ತೀರ್ಪುಗಾರರು ಮತ್ತು ಮರಣದಂಡನೆ ವಿಧಿಸುವವರ ಪಾತ್ರವನ್ನ ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.