ನವದೆಹಲಿ: ಸಂಸತ್ ಸದಸ್ಯತ್ವ ರದ್ದಾಗಿ ಮರುಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಸಂಸತ್ನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಸಂಸತ್ ಸದಸ್ಯತ್ವ ಮರಳಿ ಪಡೆದ ಬಳಿಕ 2ನೇ ದಿನ ಲೋಕಸಭೆಗೆ ಆಗಮಿಸಿದ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಈ ವೇಳೆ ಮಣಿಪುರ ವಿಚಾರವನ್ನ ತೆಗೆದುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಏರ್ಪಟಿತು.
ಮಣಿಪುರ ಗಲಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ, ಅಲ್ಲಿನ ಸ್ಥಿತಿಗತಿಯನ್ನ ಗಮನಿಸಿದ್ದೇನೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಏಕೆಂದರೆ ಮೋದಿಗೆ ಮಣಿಪುರ ಭಾರತದ ಭಾಗ ಅಂತಾ ಮೋದಿಗೆ ಅನ್ನಿಸಿಯೇ ಇಲ್ಲ. ಮಣಿಪುರವನ್ನ ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಭಾರತವನ್ನ ಮಣಿಪುರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದರು.