ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಮೊದಲ ಬಾರಿಗೆ ದಳಪತಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪುತ್ರರಾದ ಹೆಚ್‌ಡಿ ಕುಮಾರಸ್ವಾಮಿ ಮತ್ತು ಹೆಚ್‌ಡಿ ರೇವಣ್ಣ ಅವರೊಂದಿಗೆ ಮೋದಿ ಅವರನ್ನು ಭೇಟಿಯಾದರು.
ಭೇಟಿ ಮಾಡಿದ ಬಳಿಕ ಎಕ್ಸ್‌ನಲ್ಲಿ ಫೋಟೋಗಳನ್ನು ಮೋದಿ ಪೋಸ್ಟ್ ಮಾಡಿ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ರಾಷ್ಟ್ರದ ಪ್ರಗತಿಗೆ ದೇವೇಗೌಡರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಭೇಟಿಯ ವೇಳೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜೊತೆಗಿದ್ದರು.