ಚಿಕ್ಕೋಡಿ: ಪಂಚಮಸಾಲಿ (Panchamasali) ಸಮಾಜಕ್ಕೆ 2ಎ ಮೀಸಲಾತಿಗೆ (Reservation) ಒತ್ತಾಯಿಸಿ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಸೆ.3 ರಂದು ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ (jayamrutyunjaya Swamiji ) ಸ್ವಾಮೀಜಿ ಹೇಳಿದ್ದಾರೆ. ಬೆಳಗಾವಿಯ ಕಾಗವಾಡದಲ್ಲಿ ತಾಲ್ಲೂಕು ಪಂಚಮಸಾಲಿ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು,
ಹಿಂದಿನ ಸರ್ಕಾರ ಮೀಸಲಾತಿ 2ಡಿ ಎಂದು ನೀಡಿದ್ದರು. ನಮಗೆ 2ಎ ಮೀಸಲಾತಿ ಬೇಕಾಗಿದೆ. ಇಲ್ಲಿಯವರೆಗೆ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಈಗಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿವೇಶನ ಮುಗಿದ ಬಳಿಕ ಚರ್ಚಿಸಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಅಧಿವೇಶನ ಮುಗಿದು ಒಂದೂವರೆ ತಿಂಗಳು ಕಳೆದರೂ ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಮತ್ತೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಪ್ರತಿ ತಾಲ್ಲೂಕಿನಿಂದ ಪಂಚಮಸಾಲಿ ಸಮಾಜದ ಮುಖಂಡರನ್ನು ಹೋರಾಟಕ್ಕೆ ಆಹ್ವಾನಿಸಿ ಸಮಾಜದ ಶಕ್ತಿಯನ್ನು ತೋರಿಸಿ ಮೀಸಲಾತಿಯನ್ನು ಪಡೆದುಕೊಳ್ಳುತ್ತೇವೆ. ಈ ಹಿಂದೆ ಇದ್ದ ಬಿಜೆಪಿ (BJP) ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2ಡಿ ಮೀಸಲಾತಿ ನೀಡಿತ್ತು. ಅದು ಬೇಡವೆಂದು ತಡೆಗಾಗಿ ಕೋರ್ಟ್ ಮೆಟ್ಟಿಲೇರಿದ್ದೇವು. ನಮಗೆ 2ಎ ಮಿಸಲಾತಿ ಬೇಕಾಗಿದ್ದು ಈಗಿನ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿದರೆ ಅದನ್ನು ತೆರವುಗೊಳಿಸಿ ಮೀಸಲಾತಿ ನೀಡುವ ಎಲ್ಲಾ ಅವಕಾಶಗಳಿವೆ ಅದನ್ನು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ಹೋರಾಟವು ನಿಪ್ಪಾಣಿಯಿಂದ ಪ್ರಾರಂಭವಾಗಿ ಸಮಾಜಕ್ಕೆ ಮೀಸಲಾತಿ ದೊರೆಯುವವರೆಗೂ ರಾಜ್ಯಾದ್ಯಂತ ಮುಂದುವರೆಯಲಿದೆ.