ಬೆಂಗಳೂರು: ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭಾನುವಾರ ರಾತ್ರಿ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂದುಕೊಂಡಿದ್ದೆವು, ಅದರಂತೆ ನಮ್ಮ ಪೊಲೀಸರು ನಡೆದುಕೊಂಡಿದ್ದಾರೆ ಎಂದರು.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಇಡೀ ರಾಜ್ಯದ ಜನ ಸಹಕರಿಸಿದ್ದಾರೆ. ಅವರಿಗೂ ಧನ್ಯವಾದ. ಸಣ್ಣಪುಟ್ಟ ಘಟನೆ ಬಿಟ್ಟರೆ ಶಾಂತಿಯುತವಾಗಿ ಹೊಸ ವರ್ಷ ಪ್ರಾರಂಭವಾಗಿದೆ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಬಿಐ ನೋಟಿಸ್ ವಿಚಾರವಾಗಿ ಮಾತನಾಡಿ, ಸಿಬಿಐ ಅವರು ಅವರ ಕೆಲಸ ಮಾಡ್ತಾ ಇದ್ದಾರೆ. ನಾವು ನಮ್ಮ ಕೆಲಸ ಮಾಡ್ತೀವಿ. ಅವರಿಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದರು.