ಮಂಡ್ಯ: ರೈತರ ಹೋರಾಟಕ್ಕೆ ಹೆದರಿ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾವೇರಿ ಉಳಿವಿಗಾಗಿ ರೈತರ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಕಾವೇರಿ ನೀರು ಬಳಸುವುದು ಬೆಂಗಳೂರಿಗರೇ ಹೆಚ್ಚು, ಒಂದು ದಿನ ನೀರು ಹೆಚ್ಚು ಕಮ್ಮಿ ಆದರೆ 50 ಕರೆಗಳು ಬರುತ್ತದೆ. ಮಂಡ್ಯ ಜನರು ವಿರೋಧ ಮಾಡದಿದ್ರೆ ಇನ್ನು ಅದೆಷ್ಟು ನೀರು ಹೋಗ್ತಿತ್ತೊ ಎಂದು ಹೇಳಿದರು. ನೀರು ಬಿಟ್ಟಮೇಲೆ ಸರ್ಕಾರ ಸಭೆ ಕರೆಯುತ್ತದೆ. ರಾತ್ರೋರಾತ್ರಿ ನೀರು ಬಿಟ್ಟು ಲಿಕೇಜ್ ಹೋಗ್ತಿದೆ ಅಂತಾರೆ. ಈ ಹಿಂದೆ ಲಿಕೇಜ್ ಹೋಗ್ತಿತ್ತು ಬಸವರಾಜ ಬೊಮ್ಮಾಯಿ ಮಂತ್ರಿ ಆಗಿದ್ದಾಗ ಸರಿಪಡಿಸಿದ್ದಾರೆ.
ಈಗ ಇವರೇ ಲಿಕೇಜ್ ಹರಿಸುತ್ತಿದ್ದಾರೆ ಎಂದರು. ಇನ್ನೂ ಇಲ್ಲಿ ವಾಟರ್‌ಮನ್ ತಮಿಳುನಾಡಿನವರ ಕರ್ನಾಟಕದವರ ಗೊತ್ತಿಲ್ಲ. ನೀರು ಬಿಟ್ಟು ಸಬೂಬೂ ಹೇಳ್ತಿದ್ದಾರೆ. ಕಾವೇರಿ ನಮ್ದಲ್ಲ ದಕ್ಷಿಣ ಭಾರತದ್ದು ಎಂದು ಮಂತ್ರಿಗಳು ಹೇಳ್ತಾರೆ. ಮತ್ಯಾಕೆ ಕಾವೇರಿ ಎಂದು ಹೆಸರು ಸ್ಟಾಲಿನ್, ಪಳನಿ ಅಂತ ಹೆಸರಿಟ್ಟು ಬಿಡಿ ಎಂದು ಕಿಡಿಕಾರಿದರು. ಕಾವೇರಿ ನದಿ ಜೊತೆ ನಮಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಕಾವೇರಿ ನಮ್ಮದು ಎಂದು ಹೋರಾಟ ಮಾಡಿದ್ದೇವೆ. KRS ಇಲ್ಲದಿದ್ರೆ ಬೆಂಗಳೂರು ಜನ ಬದುಕಲು ಸಾಧ್ಯವಿಲ್ಲ, ಕುಡಿಯುವ ನೀರು ಇಲ್ಲ ಅಂದ್ರೆ ಸಾಫ್ಟ್‌ವೇರ್, ಹಾರ್ಡ್‌ವೇರ್ ಕೆಲಸಕ್ಕೆ ಬರಲ್ಲ, ಜನವರಿ ನಂತರ ಇದೆ ಪರಿಸ್ಥಿತಿ ಇದ್ರೆ ಕುಡಿಯುವ ನೀರಿಗೂ ತತ್ವಾರವಾಗುತ್ತದೆ. ಆದ್ದರಿಂದ ಬೆಂಗಳೂರಿನವರು ಕಾವೇರಿ ಹೋರಾಟಕ್ಕೆ ಬರಬೇಕು ಎಂದು ಮಾಜಿ ಸಚಿವ ಆರ್ ಅಶೋಕ್ ಕರೆ ನೀಡಿದರು.