ಬೆಂಗಳೂರು ;- ಗ್ಯಾರಂಟಿ ಯೋಜನೆಗಳ ದಿಕ್ಕು ತಪ್ಪಿಸಲು ಹೆಚ್ ಡಿಕೆ ಮಾತನಾಡುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಉಚಿತ ಯೋಜನೆಗಳ ಬಗ್ಗೆ ಜನರಿಗೆ ಖುಷಿಯಿದೆ. ಈ ಖುಷಿಯನ್ನು ತಣ್ಣಗೆ ಮಾಡಲು ಕುಮಾರಸ್ವಾಮಿ ಹೀಗೆ ಮಾತಾಡುತ್ತಾರೆ.
ಕುಮಾರಸ್ವಾಮಿಯವರು ಸಿಎಂ ಆದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಯಾಕೆ ಅಂತಾ ಕೇಳಿದ್ರೆ ಸಮ್ಮಿಶ್ರ ಸರ್ಕಾರ ಅಂತಾ ಹೇಳ್ತಾರೆ. ಆಗ ಸಿಎಂ ಕುರ್ಚಿ ಇದ್ದಿದ್ದು ಒಂದೇ, ಎರಡು ಅಲ್ಲ. ಸಹಿ ಹಾಕುತ್ತಿದ್ದು ಅವರ ಪೆನ್ನಲ್ಲಿಯೇ. ಹಣಕಾಸಿನ ಸಚಿವರು ಅವರೇ ಇದ್ರು. ಇವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ. ಈಗ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಲೋಕಸಭೆ ಚುನಾವಣೆಗೆ ಏನು ಮಾಡಬೇಕು ಎನ್ನುವ ಆತಂಕ ಜೆಡಿಎಸ್ ಬಿಜೆಪಿಗೆ ಕಾಡುತ್ತಿದೆ” ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ದಿಕ್ಕು ತಪ್ಪಿಸಲು ಹೀಗೆ ಹೇಳ್ತಾ ಇದ್ದಾರೆ. ಯಾರೋ ಕುಮಾರಸ್ವಾಮಿಗೆ ಹೇಳಿರಬೇಕು ಅದಕ್ಕೆ ಮಾತಾಡ್ತಾ ಇದ್ದಾರೆ. ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಬಿ. ಎಸ್. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಹೀಗೆ ಮಾತಾಡೋದು ಮಾಜಿ ಸಿಎಂ ಆದವರಿಗೆ ಗೌರವ ತರಲ್ಲ. ಈ ರಾಜ್ಯದ ಹಿರಿಯ ರಾಜಕಾರಣಿ ದೇವೇಗೌಡರು. ದೇವೇಗೌಡರು ವರ್ಗಾವಣೆ ವಿಚಾರ ತಪ್ಪು ಎಂದ್ರೆ ಒಪ್ಪಿಕೊಳ್ಳುತ್ತೇವೆ” ಎಂದರು.