ಬೆಳಗಾವಿ: ನಾನು ಇನ್ನೂ 22 ವರ್ಷ ರಾಜಕಾರಣದಲ್ಲಿ ಇರುತ್ತೇನೆ. ರಾಜಕೀಯದಲ್ಲಿದ್ದವರಿಗೆ ತಾಳ್ಮೆ ಮತ್ತು ದೂರದೃಷ್ಟಿ ಎರಡೂ ಬೇಕು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮಣ ಸವದಿಯವರಿಗೆ ಸೂಕ್ತ ಸ್ಥಾನಮಾನ ನೀಡುವ ವಿಚಾರದ ಕುರಿತು ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂಬುದನ್ನು ನಾನು ನಂಬುತ್ತೇನೆ. ನಾನು ಮೊದಲ ಆದ್ಯತೆಯನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ. ನೆನೆಗುದಿಗೆ ಬಿದ್ದಿರುವ ಎಲ್ಲಾ ಯೋಜನೆಗಳನ್ನು ಪೂರ್ಣ ಮಾಡುತ್ತೇನೆ. ಕ್ಷೇತ್ರದ ಜನ ನೆಮ್ಮದಿಯಿಂದ ಬದುಕುವ ಹಾಗೆ ವಾತಾವರಣ ನಿರ್ಮಾಣ ಮಾಡಿದ ಮೇಲೆ ರಾಜ್ಯ ರಾಜಕಾರಣದ ವಿಚಾರ ಮಾಡುತ್ತೇನೆ ಎಂದರು. ಕಳೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ನಾಯಕರ ಮಧ್ಯೆ ಹೊಂದಾಣಿಕೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ.ನಾನು ಅಷ್ಟು ಕೆಳಗೆ ಹೋಗಿ ಅಧ್ಯಯನ ಮಾಡಿಲ್ಲ. ಸಿ.ಟಿ ರವಿ, ಪ್ರತಾಪ್ ಸಿಂಹ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಅದರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.