ಮಂಡ್ಯ: ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ಪಾದಯಾತ್ರೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಕೆರಗೋಡು ಜನರಿಗೂ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಜನರು ಇಂತಹ ಪ್ರಚೋದನೆಗೆ ಒಳಗಾಗುವವರೂ ಅಲ್ಲ. ಹೊರಗಿನಿಂದ ಜನರನ್ನು ಕರೆತಂದು ಬೇಕೆಂತಲೇ ಗಲಾಟೆ ಮಾಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿಯವರು ಮಂಡ್ಯದಲ್ಲಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಇದಕ್ಕೆ ಜೆಡಿಎಸ್‌ನವರು ಬೆಂಬಲ ನೀಡುತ್ತಿದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದಕ್ಕೆ ಇದು ಮಂಗಳೂರಲ್ಲ. ಮಂಡ್ಯದ ಜನರು ನಿಮ್ಮ ಮಾತುಗಳಿಂದ ಪ್ರೇರಿತರಾಗಿ ಬಿಜೆಪಿ ಪರ ಒಲವು ತೋರುತ್ತಾರೆಂದು ಭಾವಿಸಿದ್ದರೆ ಅದು ಮೂರ್ಖತನ. ಹೋರಾಟದ ನೆಲದಲ್ಲಿರುವ ಅವರಿಗೆ ನಿಮ್ಮ ಢೋಂಗಿತನ ಏನೆಂಬುದು ಗೊತ್ತಿದೆ ಎಂದರು.