ಬೆಂಗಳೂರು: ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್ಗಳನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್ಗಳನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು. ಈಗಾಗಲೇ ಹಲವು ಬಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ. ಪ್ಯಾಕೇಜ್ ಟೆಂಡರ್ ರದ್ದುಮಾಡುವಂತೆ ಮನವಿ ಮಾಡಿದ್ದೇವೆ. ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಎಂಜಿನಿಯರ್ ಅವರನ್ನ ಪ್ರಶ್ನೆ ಮಾಡಿದ್ರೆ ಮೇಲಾಧಿಕಾರಿಗಳ ಕಡೆ ತೋರಿಸುತ್ತಾರೆ. ಅವರನ್ನ ಕೇಳಿದ್ರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದರು.
ಇನ್ನೂ ತಕ್ಷಣ ಪ್ಯಾಕೇಜ್ ಸಿಸ್ಟಮ್ ಸ್ಟಾಪ್ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ ಬೇರೆ ಜಿಲ್ಲೆಗಳಲ್ಲೂ ಕರೆದಿದ್ದಾರೆ. ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ದುಡ್ಡು ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 40% ಕಮಿಷನ್ ಈಗಲೂ ಮುಂದುವರಿದಿದೆ ಎಂದು ದೂರಿದ್ದಾರೆ.