ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು. ಅದೇ ನಮ್ಮ ಗುರಿಯಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ವರಿಷ್ಠರ ಜೊತೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಮಾತನಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈತ್ರಿ ಬಗ್ಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ನಾನು ಅಥವಾ ಪ್ರತಾಪ್ ಸಿಂಹ ಸಂಸದರಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕಷ್ಟೇ. ಅದೇ ನಮ್ಮ ಗುರಿ ಎಂದು ಹೇಳಿದರು.
ಎಚ್ಡಿ ದೇವೇಗೌಡ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಂಬಿಕೆ ಇಟ್ಟಿದ್ದಾರೆ. ದೇವೇಗೌಡರು ಸಣ್ಣ ಕಾರ್ಯಕರ್ತರನ್ನು ಬಿಟ್ಟು ಕೊಡಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಯಾರೂ ಭಯ ಬೀಳುವುದು, ಆತಂಕ ಪಡುವುದು ಬೇಡ. ಮೋದಿ ಜೊತೆ ದೇವೇಗೌಡರು ಮಾತನಾಡಿದ್ದರೆ ಎಂದ ತಕ್ಷಣ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇದ್ದ ಎಲ್ಲಾ ಗೋಡೆ ಬಿದ್ದು ಹೋಯ್ತು ಎಂದು ತಿಳಿಸಿದರು.