ದಾವಣಗೆರೆ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ 200ಕ್ಕೂ ಅಧಿಕ ಅಡಿಕೆ ಗಿಡಗಳು ನೆಲ ಸಮನಾಗಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನಡೆದಿದೆ. ರೈತ ಹಾಲೇಶಪ್ಪ ಎಂಬವರಿಗೆ ಸೇರಿದ್ದ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ಎರಡು ಎಕರೆ ಅಡಿಕೆ ತೋಟ ಮಾಡಿದ್ದ ಹಾಲೇಶಪ್ಪ ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮೂರು ವರ್ಷದ ಅಡಿಕೆ ಗಿಡಗಳು ದ್ವೇಷಕ್ಕೆ ಬಲಿಯಾಗಿರುವುದು ಹಾಲೇಶಪ್ಪ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಬೆಳೆ ನಾಶದ ಪರಿಹಾರಕ್ಕಾಗಿ ಅವರು ಕಾದುಕುಳಿತಿದ್ದು ಯಾವೊಬ್ಬ ಅಧಿಕಾರಿಯೂ ಅತ್ತ ಸುಳಿಯದೇ ಇರುವುದು ಅವರಲ್ಲಿ ಮತ್ತಷ್ಟು ಬೇಸರ ಮೂಡಿಸಿದೆ. ಈ ಕೃತ್ಯದಿಂದ ಮನ ನೊಂದಿರುವ ರೈತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೈತ ಹಾಲೇಶಪ್ಪ ತಮ್ಮ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಾಕಿದ್ದರು. ಈಗಾಗಲೇ ಗಿಡಗಳು ಎದೆಯೆತ್ತರಕ್ಕೆ ಬೆಳೆದಿದ್ದವು. ಕಂಡ ಕೆಲ ಕಿಡಿಗೇಡಿಗಳು ಹಳೆಯ ದ್ವೇಷಕ್ಕೆ ಉತ್ತಮ ಫಸಲು ನೀಡಲು ತಯಾರಾಗಿದ್ದ ಅಡಿಕೆ ಗಿಡಗಳನ್ನೇ ರಾತ್ರೋ ರಾತ್ರಿ ಕಡಿದು ಹಾಕಿದ್ದಾರೆ. ಬೆಳಗ್ಗೆ ಹಾಲೇಶಪ್ಪನವರು ಜಮೀನಿಗೆ ಆಗಮಿಸಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಮಕ್ಕಳಂತೆ ಸಾಕಿದ್ದ ಗಿಡಗಳು ನೆಲಕ್ಕುರುಳಿರುವುದನ್ನು ಕಂಡು ಮಾಲೀಕ ಕಣ್ಣೀರು ಹಾಕಿದ್ದಾರೆ. ಕೂಡಲೇ ಅವರು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದಾರೆ.