ಬೆಂಗಳೂರು ;- ಕರ್ನಾಟಕದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಉತ್ಪಾದನೆ ಹಾಗೂ ರಫ್ತಿಗೆ ಒತ್ತು ನೀಡಿ ಹೊಸ ಕೈಗಾರಿಕಾ ನೀತಿ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಈಗಾಗಲೇ ಮೂರು ಕೈಗಾರಿಕಾ ವಲಯಗಳ ಕರಡು ಸಿದ್ಧಗೊಂಡಿದ್ದು, ಸದ್ಯದಲ್ಲೇ ಕೈಗಾರಿಕಾ ನೀತಿ ಅಂತಿಮಗೊಳಿಸಿ ಮುಖ್ಯಮಂತ್ರಿಗಳ ಅನುಮೋದನೆ ಪಡೆಯುತ್ತೇವೆ.
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ವಿದ್ಯುತ್ಚಾಲಿತ ವಾಹನ, ವೇರ್ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಉತ್ಪಾದನೆ ಹಾಗೂ ರಫ್ತಿಗೆ ಉತ್ತೇಜನ ನೀಡುವಂತೆ ಕೈಗಾರಿಕಾ ನೀತಿ ರೂಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಇದರಂತೆ ನಾವು ಹೊಸ ನೀತಿ ರೂಪಿಸಲು ಕೆಲಸ ಮಾಡುತ್ತಿದ್ದೇವೆ. ಜತೆಗೆ ಕೈಗಾರಿಕಾ ಬೆಳವಣಿಗೆಗೆ ಉತ್ತೇಜಿಸಲು 9 ಆದ್ಯತಾ ವಲಯಗಳಲ್ಲಿ ವಿಷನ್ ಗ್ರೂಪ್ನ್ನೂ ರಚಿಸುತ್ತೇವೆ ಎಂದು ಹೇಳಿದರು.
ಏಷ್ಯಾದಲ್ಲಿ ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ. ಪೂರಕವಾಗಿ ಪರಿಷ್ಕೃತ ಕೈಗಾರಿಕಾ ನೀತಿ, ವಿಶ್ವ ದರ್ಜೆಯ ಮೂಲಸೌಕರ್ಯ, ಡಿಜಿಟಲ್ ಸೇವಾ ವಿತರಣೆ, ನವೀನ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.