ಬೆಂಗಳೂರು ;- ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆ ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, 2013 ರಿಂದ ಇ-ಸ್ವತ್ತು ಸೌಲಭ್ಯವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆಯಾದರೂ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಗ್ರಾಮೀಣ ಜನರಿಗೆ ಆಗುತ್ತಿರುವ ತೊಡಕುಗಳ ನಿವಾರಣೆಯಾಗಿಲ್ಲ.
ಹಾಗಾಗಿ ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆಗಳನ್ನು ತಂದು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಿ, ಡಿಜಿಟಲ್ ಗ್ರಂಥಾಲಯಗಳಾಗಿ ಮಾರ್ಪಡಿಸುವ ಕೆಲಸ ಭರದಿಂದ ಸಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ 5819 ಪಂಚಾಯತಿ ಗ್ರಂಥಾಲಯಗಳ ಪೈಕಿ ಈಗಾಗಲೆ 5043 ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಳಿದ ಗ್ರಂಥಾಲಯಗಳ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸಲು ಸೂಚಿಸಿದರು. ರಾಜ್ಯದ ಗ್ರಾಮೀಣ ಶಾಲೆಗಳಲ್ಲಿ 60,85,370 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ 40,19,962 ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.