ಭಾರತದ ಫುಟ್ಬಾಲ್ ಮಾಜಿ ಆಟಗಾರ ಮೊಹಮ್ಮದ್ ಹಬೀಬ್ (74) ನಿಧನರಾಗಿದ್ದಾರೆ. ಹಬೀಬ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರು ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಹಬೀಬ್ ಅವರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
1970 ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದ ಭಾರತ ತಂಡದಲ್ಲಿ ಹಬೀಬ್ ಕೂಡ ಇದ್ದರು. ಇನ್ನು ಬ್ರೆಜಿಲ್ನ ಪೆಲೆ ಅವರನ್ನು ಒಳಗೊಂಡ ನ್ಯೂಯಾರ್ಕ್ ಕಾಸ್ಮೋಸ್ ತಂಡದ ವಿರುದ್ಧ 1977ರಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಅವರು ಮೋಹನ್ ಬಾಗ್ ತಂಡದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಗೋಲು ಗಳಿಸಿದ್ದ ಅವರ ಆಟವನ್ನು ಪೆಲೆ ಕೊಂಡಾಡಿದ್ದರು.
ಹಬೀಬ್ ಅವರು ಆಟಗಾರನಾಗಿದ್ದ ಸಂದರ್ಭದಲ್ಲಿ ಹಲವಾರು ಉದ್ಯೋಗವಕಾಶಗಳು ಬಂದಿತ್ತು. ಆದರೆ ಈ ಎಲ್ಲಾ ಅವಕಾಶಗಳನ್ನು ಹಬೀಬ್ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮೊದಲ ‘ನೈಜ ವೃತ್ತಿಪರ ಫುಟ್ಬಾಲ್ ಆಟಗಾರ’ ಎಂಬ ಹೆಸರು ಬಂದಿತ್ತು.