ಬೆಂಗಳೂರು;- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಸಮಾಧಾನಗೊಂಡಿರುವ ಮಾಜಿ DCM ಡಿ.ವಿ.ಸದಾನಂದಗೌಡರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ ಇಂದು ಸದಾನಂದಗೌಡರು , ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ.
ಪಕ್ಷದ ವಿದ್ಯಮಾನಗಳ ಕುರಿತಂತೆ ಚರ್ಚಿಸಲು ತಮ್ಮನ್ನು ಭೇಟಿ ಆಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದು, ದೆಹಲಿಗೆ ಹೋಗಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿವೆ.
ಕೆಲವೇ ದಿನಗಳಲ್ಲಿ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ. ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಂಡಂತಾಗುತ್ತದೆ.
ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಿದೆ.